ಶಾರದಾ, ಎಲ್ ವಿ 
ಕನ್ನಡ ಚಿತ್ರಕಲಾವಿದೆ. ವಂಶವೃಕ್ಷ ಚಿತ್ರದಲ್ಲಿಯ ಅಭಿನಯಕ್ಕಾಗಿ ಇವರಿಗೆ 1971ರಲ್ಲಿ ರಾಷ್ಟ್ರಪ್ರಶಸ್ತಿ ಲಭಿಸಿತು. ಈ ಚಿತ್ರದಲ್ಲಿ ಕಾತ್ಯಾಯಿನಿಯ ಪಾತ್ರದಲ್ಲಿ ಇವರು ನೀಡಿದ ಅಭಿನಯ ಕನ್ನಡ ರಸಿಕರ ಮನ ಸೂರೆಗೊಂಡಿತು.  ಬೂತಯ್ಯನ ಮಗ ಅಯ್ಯು (1973), ಒಂದು ಪ್ರೇಮದ ಕಥೆ-ಇವರು ಅಭಿನಯಿ ಸಿರುವ ಇನ್ನೆರಡು ಚಿತ್ರಗಳು. ಬೂತಯ್ಯನಮಗ ಅಯ್ಯು ರಾಜ್ಯಪ್ರಶಸ್ತಿ ಪಡೆಯಿತು. ಈ ಚಿತ್ರದಲ್ಲಿ ಅಯ್ಯುವಿನ ಮಡದಿಯಾಗಿ ಇವರ ಅಭಿನಯ ಪ್ರಶಂಸೆಗೆ ಪಾತ್ರವಾಯಿತು. ವ್ಯಾಪಾರಿ ಚಿತ್ರಗಳಿಗಿಂತ ಪ್ರಾಯೋಗಿಕ ಚಿತ್ರಗಳತ್ತ ಇವರಿಗೆ ಅಪಾರ ಒಲವು. ಅಭಿನಯದಲ್ಲಿ ತಲ್ಲೀನತೆಯನ್ನು ಸಾಧಿಸಿಕೊಂಡಿರುವ ಇವರಿಗೆ ಸೂಕ್ತ ಮಾರ್ಗದರ್ಶನ ದೊರೆತದ್ದು ಗಿರೀಶಕಾರ್ನಾಡ ಹಾಗೂ ಬಿ. ವಿ. ಕಾರಂತ ಅವರಿಂದ. ಶಾರದಾ ಅವರ ಅಭಿನಯವನ್ನು ಕನ್ನಡಿಗರೇ ಅಲ್ಲದೆ ಹೊರಗಿನವರೂ ಅದರಲ್ಲಿಯೂ ಭಾರತೀಯ ಚಿತ್ರರಂಗದ ಪ್ರತಿಭಾನ್ವಿತ ವ್ಯಕ್ತಿಗಳಾದ ಸತ್ಯಜಿತ್ ರೇ, ಮೃಣಾಲ್ ಸೇನ್, ಹೃಷಿಕೇಶ್ ಮುಖರ್ಜಿ, ವಿ. ಶಾಂತಾರಾಮ್ ಮೊದಲಾದವರು ಶ್ಲಾಘಿಸಿದ್ದಾರೆ. 		
		(ಬಿ.ಎಸ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ